ನಂಬಿಕೆ ಮತ್ತು ಸಂದೇಹ

ವ್ಯಕ್ತಿ ಮತ್ತು ಸಮಾಜದ ಆಚಾರ ವಿಚಾರಗಳಿಗೆ ಹಿನ್ನೆಲೆಯಾಗಿರುವ ಮನೋಲಕ್ಷಣಗಳಲ್ಲಿ ನಂಬಿಕೆ (ಬಿಲೀಫ್) ಮತ್ತು ಸಂದೇಹ (ಡೌಟ್)-ಎರಡೂ ಸೇರುತ್ತವೆ. ಜನಜೀವನದಲ್ಲಿ ಹಾಸುಹೊಕ್ಕಾಗಿ ಅಭಿವ್ಯಕ್ತವಾಗುವ ಈ ಲಕ್ಷಣಗಳು ಒಂದು ದೃಷ್ಟಿಯಿಂದ ಸಮಾಜದಲ್ಲಿ ಕಂಡುಬರುವ ಧ್ಯೇಯಧೋರಣೆಗಳ ಅವಿಭಾಜ್ಯ ಅಂಗಗಳೆನಿಸುತ್ತವೆ. ಸಾಮಾಜಿಕ ಮೌಲ್ಯಗಳು ಅಭಿವ್ಯಕ್ತಿಗಳು ಪ್ರಮಾಣಕಗಳು ಹಾಗೂ ಪೂರ್ವಗ್ರಹಗಳ ಜೊತೆ ಜೊತೆಗೆ ಅಸ್ತಿತ್ವದಲ್ಲಿದ್ದು ಅವುಗಳಂತೆಯೆ ವ್ಯಕ್ತಿ ಜೀವನ ಹಾಗೂ ಸಮಾಜ ಜೀವನದ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಈ ಮನೋಲಕ್ಷಣಗಳು.

ಸಾಮಾನ್ಯವಾಗಿ ಯಾವುದಾದರೂ ಪ್ರಮೇಯ, ಹೇಳಿಕೆ ಅಥವಾ ತಥ್ಯಾಂಶವನ್ನು ನಿಜವೆಂದು ಭಾವಿಸಿ ಸ್ವೀಕರಿಸುವುದು ನಂಬಿಕೆ ಎನಿಸುತ್ತದೆ. ಇದು ವ್ಯಕ್ತಿ ಅಥವಾ ತತ್ತ್ವದ ಸ್ವೀಕಾರಕ್ಕೂ ಅನ್ವಯಿಸುತ್ತದೆ. ಸ್ವೀಕಾರ ಪ್ರಕ್ರಿಯೆಯಲ್ಲಿ, ನಂಬಿಕೆ ಅಭಿಮತ ಮತ್ತು ಜ್ಞಾನಗಳಿಂದ ಭಿನ್ನವಾಗಿರುತ್ತದೆ. ಅಭಿಮತವು ಆತ್ಮನಿಷ್ಠವಾಗಿಯಾಗಲೀ ವಸ್ತುನಿಷ್ಠವಾಗಿಯಾಗಲೀ ಸಮರ್ಪಕವಾಗಿರುವುದಿಲ್ಲ. ತದ್ವಿರುದ್ಧವಾಗಿ ಜ್ಞಾನ ಆತ್ಮನಿಷ್ಠವಾಗಿಯೂ ವಸ್ತುನಿಷ್ಠವಾಗಿಯೂ ಸಮರ್ಪಕವೆನಿಸುತ್ತದೆ. ಆದರೆ ನಂಬಿಕೆ ಆತ್ಮನಿಷ್ಠವಾಗಿ ಸಮರ್ಪಕವೆನಿಸಿದರೂ ವಸ್ತುನಿಷ್ಠವಾಗಿ ಅಷ್ಟಾಗಿ ಸಮರ್ಪಕವೆನಿಸದು. ಉದಾಹರಣೆಗೆ ಧ್ಯಾನದಿಂದ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂಬ ನಂಬಿಕೆಯುಳ್ಳ ವ್ಯಕ್ತಿಗೆ ಅದು ಆತ್ಮನಿಷ್ಠವಾಗಿ ಸಮರ್ಪಕವೆನಿಸಿದರೂ ಅರ್ಥಕ್ಕೆ ವಾಸ್ತವಿಕ ಆಧಾರಗಳ ಅಭಾವವಿರುವುದರಿಂದ ವಸ್ತುನಿಷ್ಠವಾಗಿ ಅಸಮರ್ಪಕವೆನಿಸುತ್ತದೆ. ಆದರೆ ದೈಹಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿವ್ಯತ್ಯಾಸಗಳಿರುತ್ತವೆ ಎಂಬ ಜ್ಞಾನ ಆತ್ಮನಿಷ್ಠವಾಗಿಯೂ ವಸ್ತುನಿಷ್ಠವಾಗಿಯೂ ಸಮರ್ಪಕವೆನಿಸುತ್ತದೆ.

ನಂಬಿಕೆ ಮತ್ತು ಜ್ಞಾನಗಳ ನಡುವೆ ಹೊರನೋಟಕ್ಕೆ ಗಣನೀಯ ಭಿನ್ನತೆ ಕಂಡುಬಂದರೂ ಅವೆರಡನ್ನೂ ಬೇರ್ಪಡಿಸುವ ನಿಶ್ಚಿತ ಎಳೆಯನ್ನು ಕಾಣುವುದು ಕಷ್ಟ. ಏಕೆಂದರೆ ಯಾವುದೇ ರೀತಿಯ ಜ್ಞಾನದ ಮೂಲದಲ್ಲಿ ನಂಬಿಕೆಯಿರುವುದನ್ನು ನಾವು ಕಾಣಬಹುದು. ಅಲ್ಲದೆ, ನಂಬಿಕೆಗಳಲ್ಲಿಯೇ ಜ್ಞಾನವು ಆಂಶಿಕವಾಗಿ ಅಂತರ್ಗತವಾಗಿರುವ ಸಾಧ್ಯತೆಯೂ ಇದೆ. ಈ ದೃಷ್ಟಿಯಿಂದ ನೋಡಿದಾಗ ನಂಬಿಕೆಗಳ ಆತ್ಮನಿಷ್ಠ-ವಸ್ತುನಿಷ್ಠ ಸಮರ್ಪಕತೆಗಳಲ್ಲಿ ವಿವಿಧ ಮಟ್ಟಗಳಿರುವುದು ಕಂಡುಬರುತ್ತದೆ. ಅಂದರೆ ನಂಬಿಕೆಗಳು ಕೂಡ ಅರಿವಿನ ವಿವಿಧ ಸ್ತರಗಳನ್ನು ಪ್ರತಿಫಲಿಸಬಲ್ಲವು ಎಂದು ಹೇಳಬಹುದು.

ತನ್ನಲ್ಲಿ ಮನೆಮಾಡಿಕೊಂಡಿರುವ ನಂಬಿಕೆಯ ಸಭ್ಯತೆಯ ಬಗ್ಗೆ ವ್ಯಕ್ತಿಗಿರುವ ವಿಶ್ವಾಸದ ಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಅಂಥ ವಿಶ್ವಾಸ ಅತಿದೃಢತೆಯಿಂದ ಅತಿತಿಥಿಲತೆಯವರೆಗೆ ವಿಭೇದನ ಹೊಂದಬಹುದು. ಅಲ್ಲದೆ ವ್ಯಕ್ತಿಯ ಜ್ಞಾನ ಹೆಚ್ಚಿದಂತೆಲ್ಲ ಹಾಗೂ ಪ್ರತ್ಯಾವರಣದಲ್ಲಿ ಬದಲಾವಣೆಯಾದಂತೆಲ್ಲ ವಿಶ್ವಾಸದ ಮಟ್ಟದಲ್ಲಿ ಏರುಪೇರುಗಳಾಗುತ್ತವೆ. ಉದಾಹರಣೆಗೆ ವರ್ಣಾಶ್ರಮ ಧರ್ಮದ ಬಗ್ಗೆ ಜನತೆಗಿರುವ ನಂಬಿಕೆಯ ಮೇಲಿರುವ ವಿಶ್ವಾಸದ ಮಟ್ಟದಲ್ಲಿ ಗಣನೀಯ ವ್ಯಕ್ತಿ ವ್ಯತ್ಯಾಸಗಳು ಕಂಡುಬರುತ್ತವೆ. ಅಷ್ಟಲ್ಲದೆ, ಆ ನಂಬಿಕೆಯ ಬಗ್ಗೆ ಒಬ್ಬನೇ ವ್ಯಕ್ತಿಯಲ್ಲಿರುಬಹುದಾದ ವಿಶ್ವಾಸದ ಮಟ್ಟದಲ್ಲಿಯೂ ವ್ಯತ್ಯಾಸವಾಗುತ್ತದೆ.

ಒಂದು ಸಮಾಜದಲ್ಲಿ ಪ್ರಚಲಿತವಾಗಿರುವ ನಂಬಿಕೆಗಳ ಸ್ವೀಕಾರ ಮತ್ತು ಆಚರಣೆಗಳಲ್ಲಿ ಗಣನೀಯ ವ್ಯಕ್ತಿ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ಯಾವುದಾದರೂ ಹೇಳಿಕೆ ಅಥವಾ ತತ್ವವನ್ನು ದೃಢವಾಗಿ ನಂಬಿ ನಡೆಯುವವ ಮತ್ತು ಅದನ್ನು ಔಪಚಾರಿಕವಾಗಿ ಸ್ವೀಕರಿಸಿ ವ್ಯವಹರಿಸುವವ. ಇವರಿಬ್ಬರ ನಡುವೆ ಅವರವರ ಅಂತರ್ಗತ ಮನೋಗತಿಯಲ್ಲಿ ಗಣನೀಯ ಭೇದ ಕಂಡುಬರುತ್ತದೆ. ದೃಢನಂಬಿಕೆಯುಳ್ಳವ ಸಾಮಾನ್ಯವಾಗಿ ತನ್ನ ನಂಬಿಕೆಗೆ ವಿರುದ್ಧವಾದ ಪುರಾವೆಗಳನ್ನು ಲಕ್ಷಿಸದೆ ತಾನು ನಂಬಿರುವುದೇ ಸತ್ಯವೆಂದು ಭಾವಿಸಿ ವ್ಯವಹರಿಸುತ್ತಾನೆ. ಉದಾಹರಣೆಗೆ, ಕಾಲಕಾಲಗಳನ್ನು ಪರಿಗಣಿಸುವಾತ, ರಾಹುಕಾಲದಲ್ಲಿ ಯಾವುದೇ ಕೆಲಸಗಳನ್ನು ಮಾಡಲು ಹಿಂಜರಿಯುತ್ತಾನೆ. ಶಕುನಗಳನ್ನು ನಂಬುವವನೂ ಇದೇ ರೀತಿ ವರ್ತಿಸುತ್ತಾನೆ. ಇಂಥವರ ನಂಬಿಕೆಗಳನ್ನು ಅಲ್ಲಗಳೆಯುವಂಥ ಸಾಕ್ಷ್ಯಾಧಾರಗಳು ಪ್ರತ್ಯಕ್ಷವಾಗಿದ್ದರೂ ಅವರು ತಮ್ಮ ವರ್ತನೆಯನ್ನು ಬದಲಾಯಿಸಲಾರರು. ಇದಕ್ಕೆ ಇನ್ನೂ ಹೆಚ್ಚು ಸಮರ್ಪಕ ಉದಾಹರಣೆಗಳೆಂದರೆ ಮತಾಂಧವ್ಯಕ್ತಿಗಳು ಮತ್ತು ವಿಭ್ರಾಂತ ಮನೋವಿಕ್ಷಿಪ್ತರು.

ಆದರೆ ಸಾಂಪ್ರದಾಯಿಕವಾಗಿ ಬಂದ ನಂಬಿಕೆಗಳನ್ನು ಕೆಲವರು ಔಪಚಾರಿಕವಾಗಿ ಸ್ವೀಕರಿಸಿದರೂ ಅವುಗಳಂತೆ ನಡೆಯಲು ಕೆಲವರು ಸಿದ್ಧರಿರುವುದಿಲ್ಲ. ಉದಾಹರಣೆಗೆ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಪಾಪಕಾರ್ಯವೆಂಬ ನಂಬಿಕೆಯನ್ನೂ ಸಾಂಪ್ರದಾಯಿಕವಾಗಿ ಸ್ವೀಕರಿಸಿದವರಲ್ಲೂ ಕೆಲವರು ತದ್ವಿರುದ್ಧವರ್ತನೆಯನ್ನು ತೋರಿಸುವ ಸಂಭವವೂ ಉಂಟು. ಅಂದಮೇಲೆ ಒಂದು ಪ್ರಮೇಯ ಅಥವಾ ಹೇಳಿಕೆಯ ಮೇಲೆ ವ್ಯಕ್ತಿಯೊಬ್ಬನಿಗೆ ನಂಬಿಕೆ ಇದೆ ಎಂದು ನಿಶ್ಚಯವಾಗಿ ಹೇಳಬೇಕಾದರೆ ಅದು ಅವನ ವರ್ತನೆಯಲ್ಲಿ ಪ್ರಕಟವಾಗಿರಬೇಕು.

ವ್ಯಕ್ತಿ ಸಮಾಜಗಳಲ್ಲಿ ಮನೆಮಾಡಿಕೊಂಡಿರುವ ಕೆಲವು ದೃಢನಂಬಿಕೆಗಳು ಸಾಪೇಕ್ಷವಾಗಿ ಶಾಶ್ವತವೆನಿಸುತ್ತವೆ. ಅಂಥ ನಂಬಿಕೆಗಳು ಕೂಡ ಸಮರ್ಥ ಪುರಾವೆಗಳ ಎದುರು ಸಡಿಲವಾಗುವುದನ್ನು ಕಾಣಬಹುದು. ಉದಾಹರಣೆಗೆ, ಪವಾಡಗಳೆಂದು ಹೆಸರಾದ ಘಟನೆಗಳು ಕೇವಲ ಚಮತ್ಕಾರಗಳೆಂದು ಸವಾಲು ಹಾಕಿ ಪ್ರದರ್ಶಿಸಿದಾಗ ಪವಾಡಗಳ ಬಗ್ಗೆ ಅಲ್ಲಿಯವರೆಗೆ ವ್ಯಕ್ತಿ ಅಥವಾ ಸಮಾಜಗಳಲ್ಲಿ ಆಳವಾಗಿ ಬೇರೂರಿದ್ದ ನಂಬಿಕೆಗಳು ಸಡಿಲವಾಗುವುದನ್ನು ಕಾಣಬಹುದು. ತತ್ಪಲವಾಗಿ ಅವರಲ್ಲಿ ಸಂಕ್ಷೋಭೆ ಕಾಣಿಸಿಕೊಳ್ಳುತ್ತದೆ.

ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ವೇಲೆ ನಂಬಿಕೆಗಳು ಬೀರುವ ಪ್ರಭಾವ ಸಾಪೇಕ್ಷವಾಗಿ ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು. ಬಾಳಿಗೊಂದು ನಂಬಿಕೆ ಅಗತ್ಯ. ಒಂದು ಸೀಮಿತ ಚೌಕಟ್ಟಿನಲ್ಲಿ ನಂಬಿಕೆಗಳು ಪ್ರಗತಿಗೆ ನೆರವಾಗುತ್ತವೆ ಅಲ್ಲದೆ ವ್ಯಕ್ತಿ ಸಮಾಜಗಳಿಗೆ ಅವು ಆಂತರಿಕ ಸಾಮರಸ್ಯ ಒದಗಿಸುತ್ತವೆ. ಆದರೆ ಇತರ ವ್ಯಕ್ತಿ-ಸಮಾಜಗಳಲ್ಲಿರುವ ನಂಬಿಕೆಗಳನ್ನು ಕಂಡು ಕೇಳಿದಾಗ ಆಂತರಿಕ ಸಾಮರಸ್ಯದಲ್ಲಿ ಸಂಕ್ಷೋಭೆ ಉಂಟಾಗಬಹುದು. ಉದಾಹರಣೆಗೆ, ಸ್ವಾಮಿನಿಷ್ಠೆಯ ಬಗ್ಗೆ ಇದ್ದಿರಬಹುದಾದ ನಂಬಿಕೆ ಒಂದು ಕಾಲದಲ್ಲಿ ವೈಯಕ್ತಿಕ ಸಂತೃಪ್ತಿ ಹಾಗೂ ಸಾಮಾಜಿಕ ಐಕಮತ್ಯಗಳಿಗೆ ಆಧಾರಪ್ರಾಯವಾಗಿದ್ದಿರಬಹುದು. ಆದರೆ ಇಂದು ಇಂಥ ನಂಬಿಕೆಯನ್ನು ಅಲ್ಲಗಳೆಯುವಂಥ ಮಾನವಸಮಾನತೆಯ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡುತ್ತಿರುವಾಗ ಹಿಂದಿನ ನಂಬಿಕೆ ತತ್ತರಿಸಬೇಕಾಗುತ್ತದೆ.

ಒಂದು ಸೀಮಿತ ಚೌಕಟ್ಟಿನಲ್ಲಿ ನಂಬಿಕೆಗಳು ರಚನಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಗಳಿಗೆ ನೆರವಾಗಬಲ್ಲವು. ವಿವಿಧ ಸಾಹಿತ್ಯ ಹಾಗೂ ಧಾರ್ಮಿಕ ಮಾರ್ಗಗಳಲ್ಲಿರುವ ನಂಬಿಕೆಗಳೂ ಸೂಕ್ತ ನಿದರ್ಶನಗಳು. ಆದರೆ ಹಲವು ವೇಳೆ ಅವು ವ್ಯಕ್ತಿ ಸಮಾಜಗಳ ಪ್ರಗತಿಗೆ ಪ್ರತಿಬಂಧಕಗಳಾಗಿ ಪರಿಣಮಿಸುತ್ತವೆ. ವಿವಿಧ ಸಾಂಸ್ಕøತಿಕ ಸಮೂಹಗಳಲ್ಲಿ ಪ್ರಚಲಿತವಾಗಿರುವ ಮೂಢನಂಬಿಕೆಗಳೂ ವ್ಯಕ್ತಿ-ಸಮಾಜಗಳ ದಾರುಣ ದುಃಖಕ್ಕೆ ಕಾರಣವಾಗಬಹುದು. ಉದಾಹರಣೆಗೆ ದೇವರನ್ನು ಒಲಿಸಿಕೊಳ್ಳಲು ಪಶುಬಲಿ ಅಥವಾ ನರಬಲಿ ಕೊಡಬೇಕೆಂಬ ನಂಬಿಕೆ ಯಾವುದೇ ಸಮಾಜದಲ್ಲಿ ಬಹುಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತದೆ. ಇಂಥ ನಂಬಿಕೆಗಳಿಗೆ ಬಲವಾದ ಸಂಪ್ರದಾಯ ರಕ್ಷಣೆಯಿದ್ದಾಗ ಅಜ್ಞಾನ ಮನೆಮಾಡಿಕೊಂಡು ವ್ಯಕ್ತಿ-ಸಮಾಜ ಜೀವನಗತಿಯಲ್ಲಿ ಸ್ಥಗಿತ ಸ್ಥಿತಿಯುಂಟಾಗುತ್ತದೆ. ಪ್ರಗತಿ ಅಸಾಧ್ಯವೆನಿಸುತ್ತದೆ.

ಇದು ಕೇವಲ ಧಾರ್ಮಿಕ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಹಾಗೂ ಆರ್ಥಿಕ ನಂಬಿಕೆಗಳಿಗೂ ಅನ್ವಯಿಸುತ್ತದೆ. ಮಕ್ಕಳು ದೈವದತ್ತವಾದುವು ಎಂಬ ನಂಬಿಕೆ ಜನಸಂಖ್ಯಾನಿಯಂತ್ರಣಕ್ಕೆ ಒಂದು ಪ್ರಬಲ ಪ್ರತಿಬಂಧಕವಾಗಬಹುದು. ಇದರಂತೆಯೇ ಸಾಮಾಜಿಕ ರೀತಿನೀತಿಗಳಿಗೂ ಕೃಷಿಪದ್ಧತಿಗಳಿಗೂ ಸಂಬಂಧಿಸಿದ ನಂಬಿಕೆಗಳು ಪ್ರಗತಿಗೆ ಅಡ್ಡಿಗಳಾಗುತ್ತವೆ. ಇಂಥ ನಂಬಿಕೆಗಳ ಬುಡವನ್ನೇ ಅಲುಗಿಸಬೇಕಾದರೆ ಸಾಧಾರ ಜ್ಞಾನಪ್ರಸಾರ ಅಗತ್ಯ. ಕೆಲವು ವೇಳೆ, ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳು ಸಮೂಹ ಘರ್ಷಣೆಗಳಿಗೆ ಅನುವು ಮಾಡಿಕೊಟ್ಟು, ತೀವ್ರ ಸಾವುನೋವುಗಳಿಗೆ ಕಾರಣವಾಗುತ್ತವೆ.

ಸಮೂಹ ಧ್ಯೇಯಧೋರಣೆ, ಅಭಿವೃತ್ತಿಗಳು, ಅನುವರ್ತನೆ ಮುಂತಾದವುಗಳ ರೂಪಣಿಯಲ್ಲಿ ನಂಬಿಕೆಗಳು ಪ್ರಮುಖ ಪಾತ್ರವಹಿಸುತ್ತವೆಯಲ್ಲದೆ ಸಾಮಾಜಿಕ ಸಂಘಟನೆಯಲ್ಲಿ ಅವುಗಳ ಅಂತಸ್ಸತ್ವ ಪ್ರತಿಫಲಿಸಿರುತ್ತದೆ. ಆದರೆ ಹಲವು ವೇಳೆ ಅವು ನಿಶ್ಚಿತ ಮನೋಮುದ್ರೆಗಳಾಗಿದ್ದು ವ್ಯಕ್ತಿ-ಸಮಾಜಗಳಲ್ಲಿ ಪರ್ಯಾಯ ಭಾವನೆಗಳು ಬೆಳೆಯಲು ಪ್ರಬಲ ಪ್ರತಿಬಂಧಕಗಳಾಗುತ್ತವೆ. ತತ್ಫಲವಾಗಿ ವ್ಯಕ್ತಿ-ಸಮಾಜಗಳ ಬೆಳವಣಿಗೆ ಸ್ಥಗಿತವಾಗುತ್ತದೆ. ಮನೋಮುದ್ರೆಗಳು ಸತ್ಯಾಂಶಗಳು ಎಂಬ ವಿಶ್ವಾಸ ಬಲವಾದಾಗ ಜ್ಞಾನದ ಬೆಳಕಿಂಡಿಗಳು ಮುಚ್ಚಿ ಅಜ್ಞಾನಾಂಧಕಾರ ತುಂಬಿಕೊಳ್ಳುತ್ತದೆ ಮತ್ತು ವ್ಯಕ್ತಿ-ಸಮಾಜಗಳು ಪ್ರಗತಿವಿಮುಖರಾಗುತ್ತಾರೆ ಎಂಬುದು ಕಾಲದೇಶಾತೀತ ಸತ್ಯ. ಸ್ಥಗಿತ ವಿಚಾರಗಳು ಮತ್ತು ಅನಮ್ಯ ನಂಬಿಕೆಗಳು ಮನೋಹ್ರಾಸ ಅಥವಾ ಶಿಥಿಲ ಸ್ಥಿತಿಯನ್ನುಂಟುಮಾಡುತ್ತವೆ ಎಂಬ ಮಾತಿನ ಸತ್ಯವನ್ನು ಇಲ್ಲಿ ಗಮನಿಸಬಹುದು.

ವಿವಿಧ ಸಾಂಸ್ಕøತಿಕ ಸಮೂಹಗಳ ನಡುವೆ ಕಂಡುಬರುವ ವ್ಯತ್ಯಾಸಗಳಿಗೆ ಆಯಾಯ ಸಮೂಹಗಳಲ್ಲಿ ಮನೆಮಾಡಿಕೊಂಡಿರುವ ನಂಬಿಕೆಗಳು ಪ್ರಬಲ ಕಾರಣಗಳೆಂಬ ಅಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದಾಗಿ ಪ್ರತಿಯೊಂದು ಸಮಾಜವು ತನ್ನ ಹಿರಿತನದ ಬಗ್ಗೆ ವಿಶಿಷ್ಟ ವಿಭ್ರಾಂತಿಗಳನ್ನು ಬೆಳಸಿ ಉಳಿಸಿಕೊಂಡು ಬರುವುದು ಸಾಮಾನ್ಯ ಸಂಗತಿ. ರಾಷ್ಟ್ರೀಯ ಭವ್ಯತಾವಿಭ್ರಾಂತಿ ಇದಕ್ಕೆ ಸೂಕ್ತ ನಿದರ್ಶನ.

ನಂಬಿಕೆಗಳು ಅಂಕುರಿಸಿ ಅಭಿವೃದ್ಧಿ ಹೊಂದಲು ವ್ಯಕ್ತಿ ಮತ್ತು ಸಮಾಜಗಳ ನಡುವಣ ಸಾಹಚರ್ಯ ಬಹುಮುಖ್ಯ. ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಅಗತ್ಯ ಆಶಯ ಮತ್ತು ನಂಬುವ ಇಚ್ಛೆಗಳು ನಂಬಿಕೆಗಳ ಬೆಳವಣಿಗೆಗೆ ಅಗತ್ಯವಾದ ಫಲವತ್ತಾದ ಭೂಮಿಯನ್ನೊದಗಿಸುತ್ತವೆ. ಸಾಮಾಜಿಕ ನಿರ್ಧಾರಕಗಳು ಹಾಗೂ ಪ್ರಕೃತಿಕ ಘಟನೆಗಳ ಆ ಭೂಮಿಯಲ್ಲಿ ನಂಬಿಕೆಯ ಬೀಜವನ್ನು ಬಿತ್ತುವುದರ ಜೊತೆಗೆ ಅವುಗಳ ಅಂಕುರ ಹಾಗೂ ಹುಲಸಾದ ಬೆಳವಣಿಗೆಗೆ ಅಗತ್ಯವಿರುವ ಗಾಳಿ, ಬೆಳಕು, ನೀರು ಮತ್ತು ಗೊಬ್ಬರಗಳನ್ನು ಒದಗಿಸುತ್ತವೆ. ಹೀಗೆ ವ್ಯಕ್ತಿ ಮತ್ತು ಪ್ರತ್ಯಾವರಣ ನಿರ್ಧಾರಕಗಳ ಸಾಹಚರ್ಯದ ಫಲವಾಗಿ ವ್ಯಕ್ತಿಯಲ್ಲಿ ನಾನಾ ರೀತಿಯ ನಂಬಿಕೆಗಳು ಅವನಿಗರಿವಿಲ್ಲದಂತೆಯೇ ಬೆಳೆದು, ಅವನ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿ ಪರಿಣಮಿಸುತ್ತವೆ.

ಮೊದಮೊದಲು, ವ್ಯಕ್ತಿಯ ಅಭ್ಯಾಸಾತ್ಮಕ ಭಾವೋದ್ವೇಗ ಪ್ರಕ್ರಿಯೆಗಳಿಂದ ನಂಬಿಕೆಗಳು ಅನುಬಂಧಿತವಾಗುತ್ತವೆ. ಆತ ಬೆಳೆದಂತೆಲ್ಲ ಆತನ ಸಾಮಾಜಿಕ ಸದಸ್ಯತ್ವ ಬಹುಮುಖವಾಗಿ, ಸಮಾಜದಲ್ಲಿ ಪ್ರಚಲಿತವಾಗಿರುವ ಹಲವು ನಂಬಿಕೆಗಳು ಆತನಲ್ಲೂ ಅವತರಿಸಿ ಬೆಳೆಯತೊಡಗುತ್ತವೆ. ಒಂದು ಜೀವನ ರೀತಿಯನ್ನು ಅನುಸರಿಸುತ್ತಿರುವಾಗ ವ್ಯಕ್ತಿ ತನ್ನ ಸಮಾಜದಲ್ಲಿನ ಇತರ ಸದಸ್ಯರ ನಂಬಿಕೆಗಳನ್ನು ತನ್ನವನ್ನಾಗಿ ಮಾಡಿಕೊಳ್ಳುವುದು ಒಂದು ದೃಷ್ಟಿಯಿಂದ ಸಹಜ ಪ್ರಕ್ರಿಯೆ ಎನಿಸುತ್ತದೆ. ತತ್ಪರಿಣಾಮವಾಗಿ ಕೌಟುಂಬಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ನಂಬಿಕೆಗಳು ಆತನಲ್ಲಿ ಅರಿವಿಲ್ಲದಂತೆಯೇ ಬೆಳೆಯುತ್ತವೆ. ಅಲ್ಲದೆ, ಸಮಾಜದ ಧ್ಯೇಯಧೋರಣೆಗಳ ನಿಯೋಗಿಗಳಂತಿರುವ ತಂದೆತಾಯಿಗಳು, ಗುರುಹಿರಿಯರು ಹಾಗೂ ಆಡಳಿತವರ್ಗದವರು ಪ್ರಜ್ಞಾಪೂರ್ವಕವಾಗಿ ಬೆಳೆಸುವ ನಂಬಿಕೆಗಳೂ ಅವನ ವ್ಯಕ್ತಿತ್ವದಲ್ಲಿ ಸೇರಿಹೋಗುತ್ತವೆ. ಇದಕ್ಕಾಗಿ ಅವರು ಹಲವು ವಾರ್ತಾಮಾಧ್ಯಮ ಮತ್ತು ನಿಯಂತ್ರಣಗಳನ್ನು ಬಳಸುತ್ತಾರೆ. ಅವರು ಬಳಸುವ ಬೃಹತ್ ಮಾಧ್ಯಮಗಳೆಂದರೆ ಶಿಕ್ಷಣ ಮತ್ತು ಪ್ರಚಾರ. ಸಾಮಾಜಿಕ ಉಪೇಕ್ಷೆ ನಿಯಂತ್ರಣ ಮಾಧ್ಯಮಗಳಲ್ಲೊಂದು. ತಮ್ಮ ಆಶಯ ಸಾಧನೆಗೆ ಈ ನಿಯೋಗಿಗಳು ಸಾಂಪ್ರದಾಯಿಕ ಪುರಾಣ ಹಾಗೂ ದಂತಕಥೆಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಇಷ್ಟಲ್ಲದೆ, ಆಡಳಿತ ವರ್ಗ ಒದಗಿಸುವ ಆದರ್ಶಗಳು ಮತ್ತು ಪೂರಕ ಸತ್ಯಾಂಶಗಳು ಹಾಗೂ ಮಾದರಿಗಳು ಕಿರಿಯರಲ್ಲಿ ಬೆಳೆಯುತ್ತಿರುವ ನಂಬಿಕೆಗಳು ನೆಲೆನಿಲ್ಲಲು ನೆರವಾಗುತ್ತವೆ.
ನಂಬಿಕೆಗಳು ವಿಶ್ವಾಸಾಧಾರಿತ ವ್ಯಕ್ತಿಸತ್ಯಗಳು. ಅವು ಯಾವುದೇ ಜನಾಂಗದ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ. ಪ್ರಗತಿ, ಸ್ಥಗಿತ ಸ್ಥಿತಿ ಹಾಗೂ ವಿಗತಿಗಳಿಗೆ ಸಾಪೇಕ್ಷವಾಗಿ ಕಾರಣವಾಗುವಂಥ ಈ ಮನೋಲಕ್ಷಣಗಳು ವ್ಯಕ್ತಿ-ಸಮಾಜ ಜೀವನವನ್ನು ನಿಯಂತ್ರಿಸುವಲ್ಲಿ ಆಡಳಿತವರ್ಗದವರಿಗೆ ಪರಿಣಾಮಕಾರಿ ಸಾಧನಗಳಾಗುತ್ತವೆ. ಇವನ್ನು ವ್ಯಕ್ತಿ ಸಮಾಜಗಳ ಹಿತಾಸಕ್ತಿಗೆ ಬಳಸಬಹುದು. ನಂಬಿಕೆಗಳು ಹೆಚ್ಚು ಹೆಚ್ಚು ವೈಜ್ಞಾನಿಕ ತಳಹದಿಯ ಮೇಲೆ ನಿಂತಾಗ ವ್ಯಕ್ತಿ-ಸಮಾಜಗಳ ಪ್ರಗತಿ ಸಾಧ್ಯವಾಗುತ್ತದೆ.

ನಂಬಿಕೆಯು ಸಾಪೇಕ್ಷವಾಗಿ ವಿಚಾರರಹಿತ ವಿಶ್ವವೆನಿಸಿದರೆ ಯಾವುದಾದರೂ ಪ್ರಮೇಯ, ಹೇಳಿಕೆ ಅಥವಾ ಸಿದ್ಧಾಂತದ ಬಗ್ಗೆ ಉಂಟಾಗುವ ಸಂದೇಹ ವಿಚಾರಯುಕ್ತ ಶಂಕೆ ಎಂದು ಹೇಳಬಹುದು. ಒಂದು ಸಿದ್ಧಾಂತದ ಬಗ್ಗೆ ಅನುಮಾನ ಪಡುವುದೆಂದರೆ ಅದರ ಪರ ಅಥವಾ ವಿರೋಧವನ್ನು ತಳೆಯದೆ, ಸತ್ಯಾಸತ್ಯತೆಯನ್ನು ಶಂಕಿಸುವುದು. ಅಂಥ ಶಂಕೆ ತರ್ಕಬದ್ದವಾಗಿರಬಹುದು ಅಥವಾ ಆಗದೇ ಇರಬಹುದು.

ಅನುಮಾನದ ಜೊತೆಜೊತೆಗೇ ನಾನಾರೀತಿಯ ಭಾವನಾನುಭವಗಳು ವ್ಯಕ್ತಿಯಲ್ಲಿ ಉಂಟಾಗುತ್ತವೆ. ಅವುಗಳಲ್ಲಿ ವ್ಯಾಕುಲತೆ ಮತ್ತು ಅಂಜಿಕೆಗಳು ಪ್ರಧಾನವಾಗಿರುತ್ತವೆ. ಸಂದೇಹವಿದ್ದಾಗ ಒಂದು ವಿಷಯದ ಪರ-ವಿರುದ್ಧ ಪುರಾವೆಗಳು ಸಾಮಾನ್ಯವಾಗಿ ಸರಿಸಮಾನಾಗಿ ಕಂಡುಬರುವುದರಿಂದ ಯಾವುದೇ ನಿರ್ಣಯ ತೆಗೆದುಕೊಳ್ಳಲು ಅಂಜಿಕೆಯಾಗುತ್ತದೆ. ತತ್ಪರಿಣಾಮವಾಗಿ ಸಂಬಂಧಪಟ್ಟ ವ್ಯಕ್ತಿಯಲ್ಲಿ ವ್ಯಾಕುತಾಭಾವ ಮೂಡುತ್ತದೆ. ಸಂದೇಹಿತ ವಿಷಯದ ಬಗ್ಗೆ ಪರ-ವಿರೋಧ ಪುರಾವೆಗಳು ಅಭಾವವಿದ್ದಾಗಲೂ ನಿರ್ಣಯ ಅಸಾಧ್ಯವಾಗಿ, ಮೇಲ್ಕಂಡ ಮಾನಸಿಕ ಅನುಭವಗಳಾಗುವ ಸಾಧ್ಯತೆ ಇದೆ.

ಸಂದೇಹ ಶೋಧನೆಗೆ ಮೂಲ. ಒಂದು ರೀತಿಯಲ್ಲಿ ಎಲ್ಲ ಬೌದ್ಧಿಕ ಸಂಶೋಧನೆಗಳ ಹಿನ್ನೆಲೆಯಲ್ಲಿ ಸಂದೇಹವಿರುವುದನ್ನು ಕಾಣಬಹುದು. ನೂತನ ಶೋಧನಗಳು ಹಾಗೂ ನಾನಾ ರೀತಿಯ ಸಿದ್ಧಾಂತ ರೂಪಣೆಗಳಿಂದ ಸಂದೇಹ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು. ಅಲ್ಲದೆ ಒಂದು ಸಂದೇಹ ಪರಿಹಾರವಾದಾಗ ಅದರ ಸ್ಥಾನದಲ್ಲಿ ಮತ್ತೊಂದು ನೂತನ ಸಂದೇಹ ತಲೆಎತ್ತಿ ನಿಲ್ಲಬಹುದು. ಅಂದ ಮೇಲೆ ಜ್ಞಾನ ಮತ್ತು ನಂಬಿಕೆಗಳ ಜೊತೆಜೊತೆಗೇ ಸಂದೇಹವೂ ಅಸ್ತಿತ್ವದಲ್ಲಿದ್ದಂತಾಯಿತು.
ಯಾವುದೇ ಸಂದೇಹ ಸೈದ್ಧಾಂತಿಕ ಅಥವಾ ವ್ಯಾವಹಾರಿಕವಾಗಿರಬಹುದು. ಪ್ರಚಲಿತ ವಿಚಾರಧಾರೆಗಳ ಸತ್ಯಾಸತ್ಯತೆಗಳ ಬಗ್ಗೆ ಶಂಕೆಪಡುವುದು ಸೈದ್ಧಾಂತಿಕ ಸಂದೇಹವೆನಿಸಿದರೆ, ಪ್ರಚಲಿತ ಆಚಾರವಿಧಿಗಳ ಸಮರ್ಪಕತೆಯ ಬಗ್ಗೆ ಶಂಕಿಸುವುದು ವ್ಯಾವಹಾರಿಕ ಸಂದೇಹವೆನಿಸುತ್ತದೆ. ಇಂಥವೆಲ್ಲ ಈ ಮೊದಲೇ ಹೇಳಿದಂತೆ ಸಂಶೋಧನೆಗೆ ಮೂಲವಾಗುತ್ತವೆ.

ನಂಬಿಕೆಯಂತೆಯೇ ಸಂದೇಹವೂ ಕೂಡ ವ್ಯಕ್ತಿ-ಸಮಾಜಗಳ ಪ್ರಗತಿ, ಸ್ಥಗಿತ ಸ್ಥಿತಿ ಹಾಗೂ ವಿಗತಿಗಳಿಗೆ ಕಾರಣವಾಗಬಹುದು. ಸತ್ಯ ನಿಷ್ಠ ಸಂದೇಹ ಪ್ರಗತಿಗೆ ಅತ್ಯಾವಶ್ಯಕ. ಅದಕ್ಕೆ ಬದಲಾಗಿ ಪೂರ್ವಾಗ್ರಹಪೀಡಿತ ಸಂದೇಹ ಪ್ರಗತಿಗೆ ಪ್ರತಿಬಂಧಕವಾಗುವುದು ಮಾತ್ರವಲ್ಲದೆ ವ್ಯಕ್ತಿ ಸಮಾಜಗಳ ವಿಗತಿಗೂ ಕಾರಣವಾಗಬಹುದು.	
		(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ